ಬಿ ಎಸ್ ಯಡಿಯೂರಪ್ಪ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಲಿಖಿತ ಒಪ್ಪಿಗೆ ನೀಡಿದರೆ ನವಗ್ರಾಮ ನಿರ್ಮಾಣ: ಮುಖ್ಯಮಂತ್ರಿ ಭರವಸೆ

know_the_cm

(ಬೆಳಗಾವಿ), ಸೆಪ್ಟೆಂಬರ್ 10, 2019

-ಸ್ಥಳಾಂತರಕ್ಕೆ ಸಿದ್ಧವಿರುವುದಾಗಿ ನದಿತೀರದ ಗ್ರಾಮಸ್ಥರು ಲಿಖಿತವಾಗಿ ತಿಳಿಸಿದರೆ ಇಡೀ ಗ್ರಾಮವನ್ನು ಎತ್ತರದ ಪ್ರದೇಶಕ್ಕೆ ಸಂಪೂರ್ಣ ಸ್ಥಳಾಂತರಿಸಿ ನವಗ್ರಾಮಗಳಲ್ಲಿ ಶಾಲೆ, ಆಸ್ಪತ್ರೆ ಸೇರಿದಂತೆ ಎಲ್ಲ ಬಗೆಯ ಮೂಲಸೌಕರ್ಯಗಳನ್ನು ಒದಗಿಸಲು ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.

-ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಹಂಪಿಹೊಳಿ ಗ್ರಾಮಕ್ಕೆ ಭೇಟಿ ನೀಡಿದ ಬಳಿಕ ಸುರೇಬಾನ ಗ್ರಾಮದ ಪರಿಹಾರ ಕೇಂದ್ರದಲ್ಲಿ ಜನರನ್ನು ಉದ್ದೇಶಿಸಿ ಅವರು ಮಾತನಾಡಿದರು.

know_the_cm

-ಪ್ರವಾಹದಿಂದ ಸಂಪೂರ್ಣ ಮನೆಗಳನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ಹೊಸ ಮನೆ ನಿರ್ಮಾಣಕ್ಕೆ ಅಡಿಪಾಯ ಹಾಕಲು ಒಂದು ವಾರದೊಳಗೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು.

-ಒಂದು ಮನೆ ನಿರ್ಮಾಣಕ್ಕೆ ಒಟ್ಟಾರೆ ಐದು ಲಕ್ಷ ರೂಪಾಯಿ ನೀಡಲು ಸರ್ಕಾರ ನಿರ್ಧರಿಸಿದ್ದು, ಮೊದಲ ಕಂತಿನಲ್ಲಿ ಅಡಿಪಾಯಕ್ಕೆ ನೀಡುವ ಒಂದು ಲಕ್ಷ ರೂಪಾಯಿ ಬಳಸಿಕೊಂಡು ಕೆಲಸ ಆರಂಭಿಸಬೇಕು ಎಂದರು.

-ಅಡಿಪಾಯ ಹಾಕಲು ಮುಂದಾಗುವ ಕುಟುಂಬಗಳಿಗೆ ವಾರದೊಳಗೆ ಒಂದು ಲಕ್ಷ ರೂಪಾಯಿ ಮೊದಲ ಕಂತು ಒಂದು ವಾರದೊಳಗೆ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚನೆಯನ್ನು ನೀಡಿದರು.

-ಅದೇ ರೀತಿ ಮನೆಗಳ ದುರಸ್ತಿಗೆ ಒಂದು ಲಕ್ಷ ರೂಪಾಯಿ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.

-ತಾತ್ಕಾಲಿಕವಾಗಿ ಸಂತ್ರಸ್ತರಿಗೆ ಶೆಡ್ ನಿರ್ಮಾಣ ಕಾಮಗಾರಿಯನ್ನು ಮೂರ್ನಾಲ್ಕು ದಿನಗಳಲ್ಲಿ ಆರಂಭಿಸಬೇಕು ಎಂದು ಸೂಚನೆ ನೀಡಿದರು.

ವ್ಯಾಪಾರಸ್ಥರಿಗೂ ಹತ್ತು ಸಾವಿರ ಪರಿಹಾರ:

-ಪ್ರವಾಹದಿಂದ ಹಾನಿಗೊಳಗಾದ ಅಂಗಡಿ ಮುಂಗಟ್ಟುಗಳ ಮಾಲೀಕರಿಗೆ ಕೂಡ ತಲಾ ಹತ್ತು ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

-ಬೆಳೆನಾಶಕ್ಕೆ ಸೂಕ್ತ ಪರಿಹಾರ ನೀಡಲು ಕೇಂದ್ರದಿಂದ ಹೆಚ್ವಿನ ಪರಿಹಾರ ನೀಡಲು ಪ್ರಯತ್ನಿಸಲಾಗುತ್ತಿದ್ದು, ನೇಕಾರ ಕುಟುಂಬಗಳಿಗೂ ಸೂಕ್ತ ಪರಿಹಾರ ನೀಡಲಾಗುವುದು ಎಂದರು.

ಮಗು ಸಾವು-ಐದು ಲಕ್ಷ ಪರಿಹಾರ ಚೆಕ್ ವಿತರಣೆ:

-ರಾಮದುರ್ಗ ತಾಲ್ಲೂಕಿನ ಸುರೇಬಾನ ಗ್ರಾಮದಲ್ಲಿ ಆರಂಭಿಸಲಾಗಿರುವ ಪರಿಹಾರ ಕೇಂದ್ರದಲ್ಲಿ ಅನಾರೋಗ್ಯದಿಂದ ಮೃತಪಟ್ಟಿರುವ ದೊಡ್ಡ ಹಂಪಿಹೊಳಿ ಗ್ರಾಮದ ನಾಲ್ಕು ವರ್ಷದ ಬಾಲಕ ಅಬ್ದುಲ್ಸಾಬ್ ಮುಲ್ಲಾನವರ ಅವರ ಕುಟುಂಬಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಐದು ಲಕ್ಷ ರೂಪಾಯಿ ಪರಿಹಾರದ ಚೆಕ್ ವಿತರಿಸಿದರು.

know_the_cm

-ಪ್ರವಾಹ ಸಂದರ್ಭದಲ್ಲಿ ನಾಪತ್ತೆಯಾಗಿರುವ ವ್ಯಕ್ತಿಯೊಬ್ಬರು ಇದುವರೆಗೆ ಪತ್ತೆಯಾಗದಿರುವುದರಿಂದ ಅವರ ಕುಟುಂಬಕ್ಕೂ ಐದು ಲಕ್ಷ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ತಡೆಗೋಡೆ-ಅಂದಾಜುಪಟ್ಟಿ ತಯಾರಿಸಲು ಸೂಚನೆ:

-ಮಲಪ್ರಭಾ ನದಿ ದಂಡೆಯ ತಡೆಗೋಡೆ ಒಡೆದ ಪರಿಣಾಮ ಹಂಪಿಹೊಳಿ ಗ್ರಾಮಕ್ಕೆ ನೀರು ನುಗ್ಗುತ್ತಿರುವುದರಿಂದ ತಡೆಗೋಡೆ ನಿರ್ಮಾಣಕ್ಕೆ ಕೂಡಲೇ ಅಂದಾಜು ಪಟ್ಟಿಯನ್ನು ತಯಾರಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಜಿಲ್ಲಾಧಿಕಾರರಿಗಳಿಗೆ ಸೂಚನೆ ನೀಡಿದರು.

-ಗ್ರಾಮಸ್ಥರು ಹಾಗೂ ಸ್ಥಳೀಯ ಶಾಸಕರ ಒತ್ತಾಯಕ್ಕೆ ಸ್ಪಂದಿಸಿದ ಅವರು, ತಡೆಗೋಡೆ ನಿರ್ಮಿಸಲು ತಕ್ಷಣ ಹಣ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.

-ಇದಕ್ಕೂ ಮುಂಚೆ ಮಾತನಾಡಿದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿ, ಸಂತ್ರಸ್ತರಿಗೆ ಸಾಂತ್ವನ ಹೇಳುವುದರ ಜತೆಗೆ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಸಂತ್ರಸ್ತರ ಮನೆಬಾಗಿಲಿಗೆ ಮುಖ್ಯಮಂತ್ರಿಗಳು ಬಂದಿದ್ದಾರೆ ಎಂದು ಹೇಳಿದರು.

-ಮನೆಗಳ ಹಾನಿ, ಮಗ್ಗಗಳ ನಷ್ಟ ಮತ್ತು ಬೆಳೆಹಾನಿಗೆ ಸೂಕ್ತ ಪರಿಹಾರ ಒದಗಿಸುವುದರ ಜತೆಗೆ ಶಾಶ್ವತ ಪರಿಹಾರಕ್ಕೆ ಸರ್ಕಾರ ಬದ್ಧವಾಗಿದೆ.

-ಪ್ರವಾಹದಿಂದ ಉಂಟಾಗಿರುವ ಹಾನಿಯ ಬಗ್ಗೆ ಸರ್ಕಾರಕ್ಕೆ ಈಗಾಗಲೇ ಸಂಪೂರ್ಣ ಮಾಹಿತಿಯಿದೆ ಎಂದರು.

-ಪ್ರಾಸ್ತಾವಿಕವಾಗಿ ಮಾತನಾಡಿದ ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ ಅವರು, ರಾಮದುರ್ಗ ತಾಲ್ಲೂಕಿನ 29 ಗ್ರಾಮಗಳು ಹಾಗೂ 9 ವಾರ್ಡಗಳನ್ನು ಶಾಶ್ವತ ಸ್ಥಳಾಂತರ ಮಾಡಲು ಮನವಿ ಮಾಡಿಕೊಂಡರು.

-ಹಂಪಿಹೊಳೆ ಸಮೀಪ ಬಾಂದಾರ ನಿರ್ಮಿಸಲು ಗ್ರಾಮಸ್ಥರ ಒತ್ತಾಯವಾಗಿದೆ. ಆದ್ದರಿಂದ ಬಾಂದಾರ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

-ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು, ಎಲ್ಲ ಸಂತ್ರಸ್ತರಿಗೆ ತಲಾ ಹತ್ತು ಸಾವಿರ ರೂಪಾಯಿ ಪರಿಹಾರ ಹಣವನ್ನು ಆರ್.ಟಿ.ಜಿ.ಎಸ್. ಮೂಲಕ ನೀಡಲಾಗುತ್ತಿದೆ ಎಂದು ತಿಳಿಸಿದರು.

-ಇದಕ್ಕೂ ಮುನ್ನ ದೊಡ್ಡ ಹಂಪಿಹೊಳಿ ಗ್ರಾಮಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿಗಳು ಪ್ರವಾಹದಿಂದ ಉಂಟಾಗಿರುವ ಹಾನಿ ಪರಿಶೀಲಿಸಿದರು.

know_the_cm

-ತಡೆಗೋಡೆ ಒಡೆದಿದ್ದು, ಮಲಪ್ರಭಾ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ಬಿಟ್ಟ ನೀರು ನೇರವಾಗಿ ಗ್ರಾಮಕ್ಕೆ ನುಗ್ಗಿ ತೀವ್ರ ಹಾನಿಯಾಗಿದೆ ಎಂದು ಗ್ರಾಮಸ್ಥರು ಮುಖ್ಯಮಂತ್ರಿಗಳಿಗೆ ಮನದಟ್ಟು ಮಾಡಿದರು.

-ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು, ಸಂಪೂರ್ಣ ಮುಳುಗಡೆಯಾಗಿರುವ ದೊಡ್ಡ ಹಂಪಿಹೊಳಿ ಹಾಗೂ ಚಿಕ್ಕ ಹಂಪಿಹೊಳಿ ಗ್ರಾಮಗಳ ಸ್ಥಳಾಂತರ ಮತ್ತು ತಡೆಗೋಡೆ ನಿರ್ಮಾಣ ಮಾಡಿಕೊಡುವುದಾಗಿ ಭರವಸೆ ನೀಡಿದರು.

know_the_cm

-ಹೊಸ ಒಡ್ಡು ನಿರ್ಮಾಣ ಸೇರಿದಂತೆ ಸೂಕ್ತ ಜಮೀನು ಗುರುತಿಸಿಕೊಟ್ಟರೆ ಶಾಶ್ವತ ಸ್ಥಳಾಂತರ ಮಾಡಲಾಗುವುದು ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

-ಸ್ಥಳದಲ್ಲಿಯೇ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದ ಮುಖ್ಯಮಂತ್ರಿಗಳು, ಸ್ವಲ್ಪ ಸಮಯಾವಕಾಶ ನೀಡಿದರೆ ಎಲ್ಲ ಬಗೆಯ ನೆರವು ಒದಗಿಸಲು ಸರ್ಕಾರ ಸಿದ್ಧವಿದೆ ಎಂದರು.ಸುನ್ನಾಳ ಗ್ರಾಮಕ್ಕೆ ತಕ್ಷಣ ಎರಡೂವರೆ ಕಿ.ಮೀ. ರಸ್ತೆ ನಿರ್ಮಿಸಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಸ್ಥಳದಲ್ಲಿಯೇ ಸೂಚನೆ ನೀಡಿದರು.

know_the_cm

-ಸವದತ್ತಿ ಶಾಸಕ ಆನಂದ ಮಾಮನಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಕೇಶ್ ಸಿಂಗ್, ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ. ಮತ್ತಿತರರು ಉಪಸ್ಥಿತರಿದ್ದರು.

*************