ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಎಸ್.ಸಿ.ಪಿ./ ಟಿ ಎಸ್ ಪಿ ಅಡಿ 29 ಸಾವಿರ ಕೋಟಿ ರೂ. ಅನುದಾನ; ಕಾಲಮಿತಿಯಲ್ಲಿ ಯೋಜನೆ ಜಾರಿಗೆ ಮುಖ್ಯಮಂತ್ರಿ ಸೂಚನೆ

know_the_cm

ವಿಧಾನಸೌಧ (ಬೆಂಗಳೂರು), ಸೆಪ್ಟೆಂಬರ್ 28

-ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಕಾರ್ಯಗಳಿಗೆ ಈ ಸಾಲಿಗೆ ನಿಗದಿಯಾಗಿರುವ 29 ಸಾವಿರ ಕೋಟಿ ರೂ.ಗಳ ಅನುದಾನವನ್ನು ಅರ್ಥಪೂರ್ಣ ಯೋಜನೆಗಳ ಮೂಲಕ ಜಾರಿಮಾಡುವಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸೂಚನೆ ನೀಡಿದ್ದಾರೆ.

-ರಾಜ್ಯ ಅನುಸೂಚಿತ ಜಾತಿಗಳು/ಅನುಸೂಚಿತ ಪಂಗಡಗಳ ಅಭಿವೃದ್ಧಿ ಕುರಿತಂತೆ ಇಂದು ನಡೆದ ರಾಜ್ಯ ಪರಿಷತ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಈ ಅನುದಾನವನ್ನು ಅರ್ಥಪೂರ್ಣವಾಗಿ ಈ ಸಾಲಿನಲ್ಲಿಯೇ ವಿನಿಯೋಗಿಸದಿದ್ದರೆ ಆಯಾ ಇಲಾಖೆಯ ಮುಖ್ಯಸ್ಥರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ತಿಳಿಸಿದರು.

-ಇಲಾಖಾ ಅಧಿಕಾರಿಗಳು ಯೋಜನೆಗಳ ಅನುಷ್ಠಾನದಲ್ಲಿ ದುರ್ಬಳಕೆಗೆ ಅವಕಾಶ ನೀಡದೆ, ಸರ್ಕಾರದ ಯೋಜನೆಗಳನ್ನು ಪ್ರತಿ ಅರ್ಹ ಫಲಾನುಭವಿಗೆ ತಲುಪಿಸಬೇಕು. ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿ ರಾಜ್ಯದಲ್ಲಿ ದೊಡ್ಡ ಮಟ್ಟದ ಬದಲಾವಣೆಯಾಗುವ ನಿಟ್ಟಿನಲ್ಲಿ ಅಧಿಕಾರಿಗಳು ಸಹಕರಿಸಬೇಕು ಎಂದರು. ಯೋಜನೆಗಳ ಅನುಷ್ಠಾನದಲ್ಲಿರುವ ನ್ಯೂನತೆಗಳನ್ನು ನೀಡಲಾಗಿರುವ ಸೂಚನೆಗಳಿಗೆ ಅನುಸಾರವಾಗಿ ಸರಿಪಡಿಸುವಂತೆ ಅವರು ಸೂಚಿಸಿದರು. ಯೋಜನೆಗಳ ಫಲಾನುಭವಿಗಳ ಆಯ್ಕೆಗೆ ಸಂಬಂಧಿಸಿದಂತೆ ಮಾರ್ಗಸೂಚಿಯನ್ನು ಸಿದ್ಧಪಡಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

-ಸಭೆಯಲ್ಲಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್, ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ, ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ, ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ಸಂಸದ ಧೃವನಾರಾಯಣ, ಶಾಸಕರುಗಳಾದ ಕೆ.ಅನ್ನದಾನಿ, ಜಿ. ಉಮೇಶ್ ಯಾದವ್, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಸಮಾಜ ಕಲ್ಯಾಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಎಂ. ಲಕ್ಷ್ಮೀನಾರಾಯಣ ಅವರು ಉಪಸ್ಥಿತರಿದ್ದರು.