ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ತೆರಿಗೆ ಸಂಗ್ರಹದಲ್ಲಿ ಇಲಾಖೆಗಳು ಗುರಿ ಮೀರಿ ಸಾಧನೆ ಮಾಡಲು ಮುಖ್ಯಮಂತ್ರಿಗಳ ಸೂಚನೆ

know_the_cm

ಗೃಹ ಕಚೇರಿ ಕೃಷ್ಣಾ(ಬೆಂಗಳೂರು) ಸೆಪ್ಟೆಂಬರ್ 14

-ತೆರಿಗೆ ಸಂಗ್ರಹದಲ್ಲಿ ಸಂಬಂಧಿಸಿದ ಎಲ್ಲ ಇಲಾಖೆಗಳು ಗುರಿ ಮೀರಿ ಸಾಧನೆ ಮಾಡಿರುವ ಬಗ್ಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು.

-ಗೃಹ ಕಚೇರಿ ಕೃಷ್ಣಾದಲ್ಲಿ ಅವರು ವಾಣಿಜ್ಯ ತೆರಿಗೆ, ಅಬಕಾರಿ, ಸಾರಿಗೆ, ನೊಂದಣಿ ಮತ್ತು ಮುದಾಂಕ ಇಲಾಖೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿ ತೆರಿಗೆ ಸಂಗ್ರಹದಲ್ಲಿ ಇನ್ನಷ್ಟು ಉತ್ತಮ ಸಾಧನೆ ಮಾಡುವಂತೆ ಸೂಚಿಸಿದರು.

-ಜಿ.ಎಸ್.ಟಿ ಜಾರಿಯಾಗಿರುವ ಹಿನ್ನೆಲೆಯಲ್ಲಿ ಪರಿಣಾಮಕಾರಿಯಾಗಿ ಪರಿಶೀಲನಾ ಕಾರ್ಯ ನಡೆಸುವಂತೆ ಸೂಚಿಸಿದ ಮುಖ್ಯಮಂತ್ರಿಗಳು, ಸರ್ಕಾರ ದೂರದೃಷ್ಠಿಯುಳ್ಳ ಯೋಜನೆಗಳು ಯಶಸ್ವಿಯಾಗಲು ತೆರಿಗೆ ಸಂಗ್ರಹ ಪರಿಣಾಮಕಾರಿಯಾಗಿ ಆಗಬೇಕು. ಈ ನಿಟ್ಟಿನಲ್ಲಿ ಎಲ್ಲ ತೆರಿಗೆ ಇಲಾಖೆಗಳು ಕಾರ್ಯೋನ್ಮುಖವಾಗಿರುವುದು ಉತ್ತಮ ಬೆಳವಣಿಗೆ ಎಂದರು. ತೆರಿಗೆ/ ರಾಜಸ್ವ ಸಂಗ್ರಹದಲ್ಲಿ ಜನಸ್ನೇಹಿಯಾಗಿ, ಆದರೆ ಸರ್ಕಾರಕ್ಕೆ ನಾಗರಿಕರು ಪಾವತಿಸಬೇಕಾದ ತೆರಿಗೆಯನ್ನು ಕಡ್ಡಾಯವಾಗಿ ಪಾವತಿಸುವಂತೆ ಕಾರ್ಯನಿರ್ವಹಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

-ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಏಪ್ರಿಲ್ 2018 ರಿಂದ ಆಗಸ್ಟ್ ರವರೆಗೆ ಒಟ್ಟು 28537 ಕೋಟಿ ರೂ.ಗಳು ಸಂಗ್ರಹವಾಗಿದ್ದು, ಸೆಪ್ಟೆಂಬರ್ 2018 ರಿಂದ ಮಾರ್ಚ್ ವರಗೆ 38383 ಕೋಟಿ ರೂ.ಗಳ ತೆರಿಗೆ ಸಂಗ್ರಹವಾಗುವ ಅಂದಾಜಿದ್ದು, ಕಳೆದ ವರ್ಷಕ್ಕೆ ಹೋಲಿಸಿದಾಗ ಶೇ 18.7 ರಷ್ಟು ಹೆಚ್ಚಳವಾಗಿದೆ.

-ಅಬಕಾರಿ ಇಲಾಖೆಯಲ್ಲಿ 19750 ಕೋಟಿ ರೂ.ಗಳ ವಾರ್ಷಿಕ ಗುರಿ ಇದ್ದು, ಆಗಸ್ಟ್ ಮಾಹೆಯ ಅಂತ್ಯಕ್ಕೆ 8150.45 ಕೋಟಿ ರೂ.ಗಳ ತೆರಿಗೆ ಸಂಗ್ರಹವಾಗಿದೆ, ಕಳೆದ ವರ್ಷಕ್ಕೆ ಹೋಲಿಸಿದಲ್ಲಿ 996.73 ಕೋಟಿ ರೂ.ಗಳ ಹೆಚ್ಚಳವಾಗಿದೆ. ಸಾರಿಗೆ ಇಲಾಖೆಯಲ್ಲಿ ಏಪ್ರಿಲ್ ನಿಂದ ಆಗಸ್ಟ್ 2018 ರವರೆಗೆ 2377.67 ಕೋಟಿ ರೂ.ಗಳಷ್ಟು ರಾಜಸ್ವ ಸಂಗ್ರಹವಾಗಿದ್ದು, ಕಳೆದ ಸಾಲಿಗೆ ಹೋಲಿಸಿದರೆ 161.15 ಕೋಟಿ ರೂ.ಗಳ ಹೆಚ್ಚಳವಾಗಿದೆ.

-ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ರಾಜ್ಯದಲ್ಲಿ ರಾಜಸ್ವ ಸಂಗ್ರಹದಲ್ಲಿ 3 ನೇ ಸ್ಥಾನದಲ್ಲಿದೆ. ಆಗಸ್ಟ್ ವರೆಗೆ 4300 ಕೋಟಿ ರೂ.ಗಳ ಗುರಿಯಿದ್ದು, 4332 ಕೋಟಿ ರೂ. ಗಳನ್ನು ಸಂಗ್ರಹಿಸಲಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ವಾರ್ಷಿಕ ಗುರಿ 3000 ಕೋಟಿಗಳಿದ್ದು, 2018ರ ಜುಲೈ ವರೆಗೆ ರಾಜಸ್ವ ಸಂಗ್ರಹಣೆ ಒಟು728.15 ಕೋಟಿ ರೂ.ಗಳಾಗಿದೆ.

-ಸಭೆಯಲ್ಲಿ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಡಾ. ಸುಬ್ರಮಣ್ಯ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎನ್.ಎಸ್.ಪ್ರಸಾದ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಇ.ವಿ.ರಮಣರೆಡ್ಡಿ ಹಾಗೂ ಸಂಬಂಧಪಟ್ಟ ಇಲಾಖೆಯ ಆಯುಕ್ತರು ಮತ್ತಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.