ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಅಮೆರಿಕಾದ ವಾಷಿಂಗ್ಟನ್ ಡಿಸಿ ಬಳಿ ಏರ್ಪಡಿಸಲಾಗಿದ್ದ ಹೂಡಿಕೆದಾರರ ಸಭೆಯಲ್ಲಿ ಮುಖ್ಯಮಂತ್ರಿಗಳ ಭಾಷಣದ ಮುಖ್ಯಾಂಶಗಳು

ವಾಷಿಂಗ್ಟನ್ ಡಿಸಿ(ಅಮೆರಿಕ), ಜುಲೈ 02, 2019

-ನಾನು ಅಮೆರಿಕಾದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಆಗಮಿಸಿದ್ದರೂ, ಈ ಅವಕಾಶ ಬಳಸಿಕೊಂಡು ಹೂಡಿಕೆದಾರರನ್ನು ಭೇಟಿಯಾಗಿ ಕರ್ನಾಟಕದಲ್ಲಿನ ಹೂಡಿಕೆಯ ಅವಕಾಶಗಳ ಕುರಿತು ಬೆಳಕು ಚೆಲ್ಲುವ ಉದ್ದೇಶದಿಂದ ಈ ಸಭೆಯನ್ನು ಏರ್ಪಡಿಸಲಾಗಿದೆ.

-ಕೈಗಾರಿಕಾ ವಲಯದಲ್ಲಿ ಭಾರತದಲ್ಲಿ ಮುಂಚೂಣಿಯಲ್ಲಿರುವ ರಾಜ್ಯ ಕರ್ನಾಟಕ. ಭಾರತೀಯ ಹಾಗೂ ವಿದೇಶಿ ಹೂಡಿಕೆದಾರರ ನೆಚ್ಚಿನ ತಾಣವಾಗಿ ರೂಪುಗೊಂಡಿದ್ದು, ಸತತ ಮೂರನೇ ವರ್ಷ ಬಂಡವಾಳ ಆಕರ್ಷಿಸುವಲ್ಲಿ ಮೊದಲ ರಾಜ್ಯವೆಂದು ಮನ್ನಣೆ ಪಡೆದಿದೆ.

-ರಾಜ್ಯದ ರಾಜಧಾನಿ ಬೆಂಗಳೂರನ್ನು ಇತ್ತೀಚೆಗೆ ಜಗತ್ತಿನ ಅತ್ಯಂತ ಕ್ರಿಯಾಶೀಲ ನಗರವೆಂದು ಗುರುತಿಸಲಾಗಿದೆ. ಇಲ್ಲಿನ ಕ್ರಿಯಾಶೀಲ, ಉದ್ಯಮ ಸ್ನೇಹಿ ನೀತಿಗಳು, ಅತ್ಯುತ್ತಮ ಮೂಲಸೌಕರ್ಯಗಳು, ಪರಿಣತ ಮಾನವಸಂಪನ್ಮೂಲ ಹಾಗೂ ನೂತನ ಆವಿಷ್ಕಾರ ಮತ್ತು ಅಭಿವೃದ್ಧಿಗೆ ಪೂರಕ ವಾತಾವರಣ, ಕರ್ನಾಟಕದ ಕೈಗಾರಿಕಾ ಬೆಳವಣಿಗೆಗೆ ಕಾರಣವಾಗಿದೆ. ಈ ಕಾರಣಕ್ಕಾಗಿಯೇ ದೇಶದ ಜಿಡಿಪಿ 7.2 ರಷ್ಟಿದ್ದರೆ, ರಾಜ್ಯದ ಜಿಡಿಪಿ ಶೇ.10ರಷ್ಟಿದೆ.

-ಭಾರತದ ಮಷೀನ್ ಟೂಲ್ ಉತ್ಪಾದನೆಯ ಶೇ. 50 ರಷ್ಟು, ಐಟಿ ರಫ್ತಿನ ಶೇ. 39 ರಷ್ಟು, ರಕ್ಷಣಾ ವಲಯಕ್ಕೆ ಶೇ. 67 ರಷ್ಟು ವಿಮಾನಗಳು, ಹೆಲಿಕಾಪ್ಟರ್ಗಳ ಪೂರೈಕೆ ಹಾಗೂ ಜೈವಿಕ ತಂತ್ರಜ್ಞಾನ ರಫ್ತಿನ ಶೇ. 33 ರಷ್ಟು ಕೊಡುಗೆ ಕರ್ನಾಟಕದ್ದಾಗಿದೆ.

-ಇದಲ್ಲದೆ ಬ್ಲಾಕ್ ಚೇನ್, ಅಡಿಟಿವ್ ಮ್ಯಾನ್ಯುಫಾಕ್ಚರಿಂಗ್, 3ಡಿ ಪ್ರಿಂಟಿಂಗ್, ರೊಬೊಟಿಕ್ಸ್, ನಾನೊ-ಟೆಕ್ನಾಲಜಿ, ಮೆಡಿಕಲ್ ಟೆಕ್ನಾಲಜಿ ಮತ್ತು ಜೆನೆಟಿಕ್ ಎಂಜಿನಿಯರಿಂಗ್ ನಂತಹ ಅತ್ಯಾಧುನಿಕ ತಂತ್ರಜ್ಞಾನದಲ್ಲಿಯೂ ನಮ್ಮ ರಾಜ್ಯ ಮುಂಚೂಣಿಯಲ್ಲಿದೆ.

-ಉದ್ಯಮ ಸ್ನೇಹಿ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಉದ್ಯಮ ಸುಧಾರಣಾ ಕ್ರಿಯಾ ಯೋಜನೆಯ ಶೇ. 98.6 ರಷ್ಟು ಗುರಿ ಸಾಧನೆ ಮಾಡಿದೆ. ಕಾಲಮಿತಿಯಲ್ಲಿ ಯೋಜನೆಗಳ ಅನುಮೋದನೆ ಹಾಗೂ ವಿವಿಧ ಪ್ರಾಧಿಕಾರಗಳ ಅನುಮತಿ ಹಾಗೂ ಪರವಾನಗಿ ಒದಗಿಸಲು ಸಮಗ್ರ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

-ಹೊಸ ಕೈಗಾರಿಕೆಗಳು ಹಾಗೂ ಉದ್ಯಮಿಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ 20 ಕ್ಕೂ ಹೆಚ್ಚು ನೀತಿಗಳನ್ನು ಜಾರಿಗೆ ತರಲಾಗಿದೆ. ಇತ್ತೀಚೆಗೆ ನಾವು ವಿದ್ಯುತ್ಚಾಲಿತ ವಾಹನಗಳು ಹಾಗೂ ಇಂಧನ ಸಂಗ್ರಹ ನೀತಿ 2017ನ್ನು ಜಾರಿಗೆ ತಂದಿದ್ದು, ಈ ನೀತಿ ಜಾರಿಗೆ ತಂದ ಮೊದಲ ರಾಜ್ಯ ನಮ್ಮದಾಗಿದೆ.

-ಸರ್ಕಾರವು ನೂತನ ಕೈಗಾರಿಕಾ ನೀತಿ 2019-24ನ್ನು ರೂಪಿಸುತ್ತಿದ್ದು, ಅದರಲ್ಲಿ ಜಾಗತಿಕ ಮಾನದಂಡಗಳನ್ವಯ ಕೈಗಾರಿಕೆಗಳಿಗೆ ಮೂಲಸೌಕರ್ಯ, ನೀತಿಗಳು ಮತ್ತು ಅನುಷ್ಠಾನಕ್ಕೆ ಆದ್ಯತೆ ನೀಡಲಾಗಿದ್ದು, ಕರ್ನಾಟಕವನ್ನು ಜಾಗತಿಕ ಮಟ್ಟದ ತಯಾರಿಕೆ ಮತ್ತು ಸೇವಾ ವಲಯವಾಗಿ ರೂಪಿಸುವ ಗುರಿ ಹೊಂದಿದ್ದೇವೆ.

-ರಾಜ್ಯದ ಎರಡನೇ ಮತ್ತು ಮೂರನೇ ಸ್ತರದ ನಗರಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ ನೀಡುವಲ್ಲಿ 9 ಜಿಲ್ಲೆಗಳಲ್ಲಿ ಕೈಗಾರಿಕಾ ಕ್ಲಸ್ಟರ್ಗಳನ್ನು ಸ್ಥಾಪಿಸಲಾಗುತ್ತಿದೆ. ದೇಶದಲ್ಲಿಯೇ ಮೊದಲ ಬಾರಿ ಜಾರಿಗೊಳ್ಳುತ್ತಿರುವ ಈ ಯೋಜನೆಯಡಿ ಉತ್ಪಾದನಾ ವಲಯಕ್ಕೆ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ.

-ರಾಜ್ಯದಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳೂ ಸಾಕಷ್ಟು ಸಂಖ್ಯೆಯಲ್ಲಿದ್ದು, ಅವುಗಳಿಗೆ ಉತ್ತೇಜನ ನೀಡುವ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.

-ನಾಲ್ಕನೇ ಕೈಗಾರಿಕಾ ಕ್ರಾಂತಿಯಲ್ಲಿ ಕರ್ನಾಟಕವು ಮುಂಚೂಣಿಯ ರಾಜ್ಯವಾಗಿ ಹೊಮ್ಮಬೇಕೆನ್ನುವುದು ನಮ್ಮ ದೃಢ ಸಂಕಲ್ಪ. ಈ ನಿಟ್ಟಿನಲ್ಲಿ ಉತ್ಪಾದನೆಯನ್ನು ಡಿಜಿಟಲೀಕರಣಗೊಳಿಸಲು ಅತ್ಯಾಧುನಿಕ ತಂತ್ರಜ್ಞಾನಗಳ ಬಳಕೆ ಮಾಡಲು ನಮ್ಮ ಸರ್ಕಾರ ಉತ್ಸುಕವಾಗಿದೆ. ಕರ್ನಾಟಕವು ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದಲ್ಲಿ ವಿಶ್ವದಲ್ಲಿಯೇ ಮೊದಲ ಐದು ತಾಣಗಳಲ್ಲಿ ಒಂದಾಗಿದೆ.

-ಸ್ಟಾರ್ಟ್ಅಪ್ಗಳ ವಿಷಯದಲ್ಲಿ 2ನೇ ಸ್ಥಾನದಲ್ಲಿದೆ.

-ಇನ್ನಷ್ಟು ಹೂಡಿಕೆ ಆಕರ್ಷಿಸಿ, ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ರಾಜ್ಯವು 2020ರ ಜನವರಿಯಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶವನ್ನು ಹಮ್ಮಿಕೊಂಡಿದೆ. ಈ ಸಮಾವೇಶವನ್ನು ಯಶಸ್ವಿಗೊಳಿಸಲು ಹಾಗೂ ಕರ್ನಾಟಕದಲ್ಲಿ ಲಭ್ಯವಿರುವ ವಿನೂತನ ಹಾಗೂ ವಿಶಿಷ್ಟ ಉದ್ಯಮಗಳ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಮುಖ್ಯಮಂತ್ರಿಗಳು ಮನವಿ ಮಾಡಿದರು.

-ಈ ಸಭೆಯನ್ನು ಆಯೋಜಿಸಿದ್ದ ಅಮೆರಿಕಾದ ಕನ್ನಡಿಗರಾದ ಕೀರ್ತಿ ಸ್ವಾಮಿ, ಎಲಿಷಾ ಪುಲವರ್ತಿ, ಪವನ್ ಬೆಜವಾಡ, ಸುರೇಶ್ ರಾಮಚಂದ್ರ, ಆನಂದ್ ಪೂಜಾರಿ, ಶಾಂತಾ ರಾಜ್, ಮಾದೇಶ ಬಸವರಾಜ್ ಮತ್ತು ಬೆನ್ ಚಿಕ್ಕಸ್ವಾಮಿ ಅವರು ಈ ಸಭೆ ಆಯೋಜಿಸಲು ನೀಡಿ, ಅವರ ಸಹೋದ್ಯೋಗಿಗಳಿಗೆ ಮುಖ್ಯಮಂತ್ರಿಗಳು ಅಭಿನಂದನೆ ಸಲ್ಲಿಸಿದರು.

-ಈ ಸಭೆಯಲ್ಲಿ, ವಿವಿಧ ಉದ್ಯಮಿಗಳ ಸಂಘಟನೆಗಳ ಪ್ರತಿನಿಧಿಗಳು, ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು, ಅಮೆರಿಕಾದ ಉದ್ಯಮಿಗಳು, ಅಧಿಕಾರಿಗಳು ಭಾಗವಹಿಸಿದ್ದರು.

*********************************