ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ - ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳ ಸೂಚನೆ

ವಿಧಾನಸೌಧ(ಬೆಂಗಳೂರು), ಜೂನ್ 11, 2019

-ರಾಜ್ಯದ ರಸ್ತೆ ಅಭಿವೃದ್ಧಿಗೆಂದು ಲೋಕೋಪಯೋಗಿ ಇಲಾಖೆಗೆ ಕಳೆದ ಎರಡು ಆಯವ್ಯಯದಲ್ಲಿ 21 ಸಾವಿರ ಕೋಟಿ ರೂ.ಗಳ ವೆಚ್ಚದ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಈ ಕಾಮಗಾರಿಗಳನ್ನು ಮುಂದಿನ 6-7 ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸೂಚನೆ ನೀಡಿದರು.

-ಲೋಕೋಪಯೋಗಿ ಇಲಾಖೆಯ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ನಡೆದ ಇಲಾಖೆಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

-ಶಾಲಾಸಂಪರ್ಕ ಸೇತು ಯೋಜನೆಯಡಿ ರಾಜ್ಯದಲ್ಲಿ ಒಟ್ಟು 1508 ಸೇತುವೆಗಳನ್ನು 187 .04 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ 963 ಕಾಮಗಾರಿಗಳು ಪೂರ್ಣಗೊಂಡಿವೆ, ಇನ್ನುಳಿದ ಕಾಮಗಾರಿಗಳನ್ನು 2-3 ತಿಂಗಳಿನಲ್ಲಿ ಪೂರ್ಣಗೊಳಿಸಲು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು.

-ಶಾಲೆ ಮತ್ತು ಕಾಲೇಜುಗಳ ನವೀಕರಣಕ್ಕಾಗಿ 1200 ಕೋಟಿ ರೂ.ಗಳನ್ನು ನೀಡಲಾಗಿದೆ. ಶಾಲಾ ಕಾಲೇಜುಗಳ ನವೀಕರಣವನ್ನು ತ್ವರಿತವಾಗಿ ಅನುಷ್ಠಾನಕ್ಕೆ ತರುವಂತೆ ಮುಖ್ಯ ಮಂತ್ರಿಗಳು ಸೂಚಿಸಿದರು. ಲೋಕೋಪಯೋಗಿ ಇಲಾಖೆ ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ಅವೈಜ್ಞಾನಿಕತೆಗೆ ಅವಕಾಶ ನೀಡದೆ, ನಿಯಮಗಳ ಕಟ್ಟುನಿಟ್ಟಿನ ಪಾಲನೆ ಮಾಡಬೇಕು. ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸದಿದ್ದಲ್ಲಿ ಅನಗತ್ಯವಾಗಿ ಯೋಜನಾ ವೆಚ್ಚ ಅಧಿಕಗೊಳ್ಳುತ್ತದೆ. ಇದಕ್ಕೆ ಸಂಪೂರ್ಣ ಕಡಿವಾಣ ಹಾಕುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

-ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ತ್ವರಿತಗೊಳಿಸಲು ಅಗತ್ಯ ಕ್ರಮಕೈಗೊಳ್ಳಲು ತಿಳಿಸಿದ ಅವರು. ಈಗಾಗಲೇ ಮುಖ್ಯ ಕಾರ್ಯದರ್ಶಿಗಳು ಇದಕ್ಕೆ ಸಂಬಂಧಿಸಿದಂತೆ ಪ್ರತಿ ತಿಂಗಳು ವಿಡಿಯೋ ಸಂವಾದದ ಮೂಲಕ ಪ್ರಗತಿ ಪರಿಶೀಲಿಸಿದ್ದಾರೆ.

-ಬೆಂಗಳೂರು- ಮೈಸೂರು ಕಾರಿಡಾರ್ ನ ಶೇ.90 ರಷ್ಟು ಭೂಸ್ವಾಧೀನ ಹಾಗೂ ಅರಣ್ಯ ಇಲಾಖೆಗೆ ಸಂಬಂಧಿಸಿದ ಕೆಲಸಗಳು ಪೂರ್ಣಗೊಂಡಿವೆ ಎಂದರು. ಈ ಕಾರ್ಯಕ್ಕೆ ಇರುವ ಅಡೆತಡೆಗಳನ್ನು ಶೀಘ್ರವಾಗಿ ನಿವಾರಿಸಿ ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

-ಸರ್ಕಾರದ ಪಾರದರ್ಶಕ ಆಡಳಿತ ನೀಡಲು ಹಾಗೂ ಗುಣಾತ್ಮಕ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಅಧಿಕಾರಿಗಳಲ್ಲಿ ಪ್ರಾಮಾಣಿಕತೆ ಅಗತ್ಯವಿದೆ. ಮೂವತ್ತು ವರ್ಷಗಳ ನಂತರ ಲೋಕೋಪಯೋಗಿ ಇಲಾಖೆಯ ಎಲ್ಲಅಧಿಕಾರಿಗಳ ಸಭೆ ಏರ್ಪಡಿಸಲಾಗಿದೆ. ರಾಜ್ಯದ ಅಭಿವೃದ್ಧಿಯಲ್ಲಿ ಇಂಜಿನಿಯರ್ ಗಳ ಪಾತ್ರ ಬಹಳ ದೊಡ್ಡದು, ಅವರು ತಮ್ಮ ಕಾರ್ಯವನ್ನು ಹೊಣೆಗಾರಿಕೆಯಿಂದ ನಿರ್ವಹಿಸಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

-ಉಪಮುಖ್ಯಮಂತ್ರಿ ಡಾ|| ಜಿ.ಪರಮೇಶ್ವರ್ ಮಾತನಾಡಿ, ಯೋಜನೆಗಳ ಅಂದಾಜು ಪಟ್ಟಿ 100 ಕ್ಕೆ 100ರಷ್ಟು ಕರಾರುವಕ್ಕಾಗಿ ಇರಬೇಕು. ನಿಗದಿತ ದರಕ್ಕಿಂತ ಹೆಚ್ಚು ಅಥವಾ ಕಡಿಮೆ ಆಗುವುದನ್ನು ತಪ್ಪಿಸಬೇಕು ಎಂದರು. ರಸ್ತೆಗಳ ಸುಧಾರಣೆಯತ್ತ ಕಳೆದ 5 ವರ್ಷಗಳಲ್ಲಿ ಸುಮಾರು 49 ಸಾವಿರ ಕೋಟಿಗಳ ವೆಚ್ಚ ಮಾಡಲಾಗಿದೆ. ಮುಂದಿನ 5 ವರ್ಷಗಳಿಗೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ರಸ್ತೆ ಅಭಿವೃದ್ಧಿಗೆ ನೀಲನಕ್ಷೆ ರೂಪಿಸಿ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

-ಗುತ್ತಿಗೆದಾರರು ಒಪ್ಪಂದದ ಪ್ರಕಾರ ಕೆಲಸ ನಿರ್ವಹಿಸದಿದ್ದಲ್ಲಿ ಅವರಿಗೆ ನೋಟೀಸು ನೀಡುವಂತೆ ಸೂಚಿಸಿದರು.

-ಲೋಕೋಪಯೋಗಿ ಇಲಾಖೆ ಸಚಿವ ಹೆಚ್.ಡಿ.ರೇವಣ್ಣ ಅವರು ಮಾತನಾಡಿ, ಒಟ್ಟು 6433 ಕಿ.ಮೀ ಉದ್ದದ ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲು ತಾತ್ವಿಕ ಅನುಮೋದನೆಯಾಗಿದೆ. ಒಟ್ಟು 405 ಕಿ.ಮೀ. ಉದ್ದದ 4 ಹೊಸ ರಾಷ್ಟ್ರೀಯ ಹೆದ್ದಾರಿಗಳನ್ನು ಘೋಷಿಸಲಾಗಿದೆ ಎಂದು ವಿವರಿಸಿದರು.

-ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಹಾಗೂ ಸಂಸದೀಯ ಕಾರ್ಯದರ್ಶಿ ತಿಪ್ಪೇಸ್ವಾಮಿ, ಮುಖ್ಯ ಕಾರ್ಯದರ್ಶಿ ಟಿ. ಎಂ.ವಿಜಯಭಾಸ್ಕರ್, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಸುಬ್ರಹ್ಮಣ್ಯ, ಲೋಕೋಪಯೋಗಿ ಇಲಾಖೆ ತಾಂತ್ರಿಕ ಸಲಹೆಗಾರ ವೆಂಕಟರಾಮ್, ಅಪರ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

'ಶಾಲಾ ಸಂಪರ್ಕ ಸೇತು’ ಯೋಜನೆ- ವಿಡಿಯೋ ಸಂವಾದ

-'ಶಾಲಾ ಸಂಪರ್ಕ ಸೇತು' ಯೋಜನೆಯ ಅನುಷ್ಠಾನವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲು, ನಿರ್ಮಾಣಗೊಂಡ ಸೇತುವೆಯ ಬಳಿಯಿಂದಲೇ ಸ್ಥಳೀಯ ಅಧಿಕಾರಿಗಳು ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಕಾಮಗಾರಿ ಪೂರ್ಣಗೊಂಡಿರುವ ಬಗ್ಗೆ ವಿವರಿಸಿದರು.

-ಶಾಲಾ ಸಂಪರ್ಕ ಸೇತು ಯೋಜನೆ ಬಹುತೇಕ ಪೂರ್ಣಗೊಂಡಿದ್ದು, ಉಳಿದ ಕಾಮಗಾರಿಗಳನ್ನು 2-3 ತಿಂಗಳಲ್ಲಿ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು.

-ಮಲೆನಾಡ ಶಾಲೆಯೊಂದರಲ್ಲಿ ಶಾಲಾ ವಿದ್ಯಾರ್ಥಿಯೊಬ್ಬನು ಕಾಲುಸಂಕ ದಾಟುವ ಸಂದರ್ಭದಲ್ಲಿ ಅಸುನೀಗಿದ ಸುದ್ದಿಯನ್ನು ಗಮನಿಸಿ, ಮುಖ್ಯಮಂತ್ರಿಗಳು ಜಾರಿಗೆ ತಂದಿರುವ ಶಾಲಾ ಸಂಪರ್ಕ ಸೇತು ಯೋಜನೆ ತ್ವರಿತ ಗತಿಯಲ್ಲಿ ಅನುಷ್ಠಾನಕ್ಕೆ ಬಂದಿದೆ.

-ಉಪಮುಖ್ಯಮಂತ್ರಿ ಡಾ|| ಜಿ.ಪರಮೇಶ್ವರ್, ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಅವರು ಮಾತನಾಡಿದರು.

*********************************