ಹೆಚ್.ಡಿ. ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿ

ಸುದ್ದಿಗಳು

ಜನವರಿ 08 ರಂದು ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಚಾಲನೆ - ಮುಖ್ಯಮಂತ್ರಿ

ಮಾನ್ಯ ಮುಖ್ಯಮಂತ್ರಿ

ಕುಮಾರಕೃಪಾ (ಬೆಂಗಳೂರು), ಡಿಸೆಂಬರ್ 01, 2018

-ರಾಜ್ಯದಲ್ಲಿನ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಜರುಗಿತು.

-ರಾಜ್ಯದಲ್ಲಿ ಒಟ್ಟು 7622 ಕಿ.ಮೀ. ಉದ್ದದ ರಸ್ತೆಯಿದ್ದು, ಈ ಪೈಕಿ ೩೩೪೮ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ರಾಜ್ಯದಲ್ಲಿದೆ. ೧೯೫೪ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದ್ದು, ಪ್ರಸಕ್ತ ಸಾಲಿನಲ್ಲಿ 516 ಕಿ.ಮೀ. ರಸ್ತೆ ನಿರ್ಮಾಣ ಕಾರ್ಯವನ್ನು ಹೊಸದಾಗಿ ಯೋಜಿಸಲಾಗಿದೆ.

-ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಅಗತ್ಯವಿರುವ ಭೂ ಸ್ವಾಧೀನ ಪ್ರಕ್ರಿಯೆ ಶೇ.೮೦ರಷ್ಟು ಮುಗಿದಿದ್ದು, ಅರಣ್ಯ , ಇಂಧನ, ಕೆಆರ್‌ಡಿಸಿಎಲ್‌ ಹಾಗೂ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣಕ್ಕೆ ಇರುವ ತೊಡಕುಗಳನ್ನು ನಿವಾರಿಸಬೇಕೆಂದು ಮುಖ್ಯಮಂತ್ರಿಗಳು ಸೂಚಿಸಿದರು.

-ಜನವರಿ 08 ರಂದು ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದ ಮುಖ್ಯಮಂತ್ರಿಗಳು, ಬೆಂಗಳೂರು ಮೈಸೂರು ಷಟ್ಪಥ ರಸ್ತೆಗೆ (ಪ್ಯಾಕೇಜ್‌ ೧) ಅರಣ್ಯ ಇಲಾಖೆಯ ಅನುಮತಿ ನೀಡುವ ಕಾರ್ಯ ಬಾಕಿ ಇದ್ದು, ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ಹಾಗೂ ಬೆಂಗಳೂರು ಮೈಸೂರು ಪ್ಯಾಕೇಜ್‌ ೨ ಕ್ಕೆ ಸಂಬಂಧಿಸಿದ ಕೆಆರ್‌ಡಿಸಿಎಲ್‌ ಭೂಮಿ ಡೀನೋಟಿಫಿಕೇಷನ್ ಮತ್ತು ಕಂದಾಯ ದಾಖಲೆಗಳ ಪರಿಷ್ಕರಣಾ ಕಾರ್ಯವನ್ನು ಪೂರ್ಣಗೊಳಿಸುವಂತೆ ಮುಖ್ಯಮಂತ್ರಿಗಳು ತಿಳಿಸಿದರು.

-ತುಮಕೂರು- ಶಿವಮೊಗ್ಗ ಪ್ಯಾಕೇಜ್ 1, 2, 3 , ಬೈರಾಪುರ ಚಳ್ಳಕೆರೆ ಪ್ಯಾಕೇಜ್ 2, ಬಳ್ಳಾರಿ ಬೈರಾಪುರ ಪ್ಯಾಕೇಜ್‌ 1 , ಚಳ್ಳಕೆರೆ ಹಿರಿಯುರು ಪ್ಯಾಕೇಜ್ 3 ಚತುಷ್ಪಥ ರಸ್ತೆ ಕಾಮಗಾರಿಗಳ ಅರಣ್ಯ ಇಲಾಖೆಯ ಅನುಮತಿಯನ್ನು ತ್ವರಿತವಾಗಿ ನೀಡುವಂತೆ ಸೂಚಿಸಿದರು. ಖಾಲಿ ಇರುವ ಸ್ಥಳಗಳಲ್ಲಿ ಭೂ ಸ್ವಾಧೀನ ಅಧಿಕಾರಿಗಳನ್ನು ತಕ್ಷಣವೇ ನೇಮಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

-ಆಶ್ರಯ ಯೋಜನೆಯಡಿ ಶೇಷಗಿರಿ ಹಳ್ಳಿ ಮತ್ತು ಹುಳ್ತಾರ್‌ ಅರಣ್ಯ ಪ್ರದೇಶದಲ್ಲಿ ಭೂಮಿಯನ್ನು ಕಳೆದುಕೊಂಡವರಿಗೆ ರಾಜ್ಯ ಸರ್ಕಾರವು ಪರ್ಯಾಯ ಭೂಮಿಯನ್ನು ಗುರುತಿಸಿದ್ದು, ಸದರಿ ಪ್ರಸ್ತಾವನೆಗೆ ಅನುಮೋದನೆ ನೀಡುವಂತೆ ರಾಮನಗರ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿಗಳು ಸೂಚಿಸಿದರು.

-ಸಭೆಯಲ್ಲಿ ಲೋಕೋಪಯೋಗಿ ಇಲಾಖೆ ಸಚಿವರ ಹೆಚ್.ಡಿ.ರೇವಣ್ಣ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಹಾನಿರ್ದೇಶಕ ಬಿ.ಎನ್.ಸಿಂಗ್, ಎನ್‌ಹೆಚ್‌ಎಐ ಸದಸ್ಯರಾದ ತಾವಡೆ, ಲೋಕೋಪಯೋಗಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐಎಸ್‌ಎನ್‌ ಪ್ರಸಾದ್, ಅರಣ್ಯ , ಇಂಧನ, ಕೆಆರ್‌ಡಿಸಿಎಲ್‌ ಇಲಾಖೆಗಳ ಮುಖ್ಯಸ್ಥರು, ಬೆಂಗಳೂರು, ರಾಮನಗರ, ಮಂಡ್ಯ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಉಪಸ್ಥಿತರಿದ್ದರು.

***********************************************