subpage

ಬಾಳಪಯಣ

ಶ್ರೀ ಸಿದ್ದರಾಮಯ್ಯ, ಸನ್ಮಾನ್ಯ ಮುಖ್ಯಮಂತ್ರಿಗಳು


ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರ ಜೀವನಗಾಥೆಯೆಂದರೆ ಕೇವಲ ಸ್ವಂತ ಪರಿಶ್ರಮದಿಂದ ಯಶಸ್ಸಿನ ಎತ್ತರಕ್ಕೆ ಏರಿದ ಈ ನಾಡಿನ ಸಾಮಾನ್ಯ ಮನುಷ್ಯರ ಬದುಕಿನ ಕತೆ.


ಶ್ರೀ ಸಿದ್ದರಾಮಯ್ಯನವರು ಹುಟ್ಟಿದ್ದು ಈ ನಾಡಿನ ಸಾವಿರಾರು ಹಳ್ಳಿಗಳಲ್ಲೊಂದಾದ ಕುಗ್ರಾಮದಲ್ಲಿ. ಹೆತ್ತವರೇನು ಪ್ರಭಾವಿಗಳಲ್ಲ, ಅವರದ್ದು ಸಾಮಾನ್ಯ ರೈತ ಕುಟುಂಬ. ಹಳ್ಳಿಗಾಡಿನ ಬದುಕಿನ ಎಲ್ಲ ಅಡೆತಡೆಗಳನ್ನು ಸವಾಲಾಗಿ ಸ್ವೀಕರಿಸಿ ಮೆಟ್ಟಿನಿಂತು ಸಾಧನೆಯ ಶಿಖರ ಏರಿದ ಶ್ರೀ ಸಿದ್ದರಾಮಯ್ಯನವರ ಬಾಳದಾರಿ ಇಂತಹದ್ದೇ ಹಿನ್ನೆಲೆಯಿಂದ ಬಂದವರಿಗೆ ಮಾರ್ಗದರ್ಶನ ಮಾತ್ರವಲ್ಲ ಸ್ಪೂರ್ತಿಯೂ ಹೌದು.


ಶ್ರೀ ಸಿದ್ದರಾಮಯ್ಯ ಅವರ ಹುಟ್ಟೂರು ಮೈಸೂರು ಜಿಲ್ಲೆ ವರುಣಾ ಹೋಬಳಿಯ ಸಿದ್ದರಾಮನ ಹುಂಡಿ ಗ್ರಾಮ,
ಜನನ 1948ರ ಆಗಸ್ಟ್ 12. ಇವರದ್ದು ಕೃಷಿ ಪ್ರಧಾನ ಕುಟುಂಬ. ಅಂದಿನ ಕಾಲದಲ್ಲಿ ಎಸ್.ಎಸ್.ಎಲ್.ಸಿ ಪಾಸು ಮಾಡುವುದೇ ಕಠಿಣವಾಗಿತ್ತು.
ಅಂತಹ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರು ತಮ್ಮ ಕುಟುಂಬದಲ್ಲಿ ಪದವಿ ಪಡೆದ ಮೊದಲಿಗರಾದರು.


ಭಾಷಣ ಮಾಡುವುದರಲ್ಲಿ ಸಿದ್ದರಾಮಯ್ಯ ಅವರದ್ದು ಎತ್ತಿದ ಕೈ. ಶಾಲಾ-ಕಾಲೇಜು ದಿನಗಳಲ್ಲಿ ಉತ್ತಮ ಭಾಷಣಕಾರರಾಗಿ ಹೊರಹೊಮ್ಮುವ ಮೂಲಕ
ಸಿದ್ದರಾಮಯ್ಯ ಅವರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.




ಬಾಲ್ಯ ಮತ್ತು ವಿಧ್ಯಾಭ್ಯಾಸ


ಶ್ರೀ ಸಿದ್ದರಾಮಯ್ಯ ಅವರು ಬಾಲ್ಯದ ದಿನಗಳನ್ನು ಕಳೆದದ್ದು ಸ್ವಗ್ರಾಮ ಸಿದ್ದರಾಮನ ಹುಂಡಿಯಲ್ಲೇ, ಆರಂಭದ ದಿನಗಳಲ್ಲಿ ವಿದ್ಯಾಭ್ಯಾಸವನ್ನು ಅರ್ಧದಲ್ಲಿಯೇ ನಿಲ್ಲಿಸಬೇಕಾದ ಪರಿಸ್ಥಿತಿ ಬಂದಿತ್ತು. ಶಾಲೆ ಬಿಟ್ಟು ದನ ಮೇಯಿಸುವ ಕಾಯಕಕ್ಕೆ ಮುಂದಾಗಬೇಕಾಯಿತು. ಆದರೆ ಬಾಲಕ ಸಿದ್ದರಾಮಯ್ಯ ಅವರಲ್ಲಿನ ಪ್ರತಿಭೆಯನ್ನು ಗಮನಿಸಿದ ಗ್ರಾಮದ ಶಾಲೆಯ ಶಿಕ್ಷಕರು ಶಾಲೆಗೆ ಕರೆತಂದು ನೇರವಾಗಿ 4ನೇ ತರಗತಿಗೆ ಪ್ರವೇಶ ಕೊಟ್ಟರು. ಬಾಲಕ ಆಗಿದ್ದಾಗ ತಾವು ದನ ಮೇಯಿಸಲು ಹೋಗುತ್ತಿದ್ದ ಸಂದರ್ಭವನ್ನು ಸಿದ್ದರಾಮಯ್ಯ ಅವರು ಆಗಾಗ ನೆನಪು ಮಾಡಿಕೊಳ್ಳುವುದುಂಟು.


ಪ್ರಾಥಮಿಕ ಶಿಕ್ಷಣದ ಬಳಿಕ ಸಿದ್ದರಾಮಯ್ಯ ಅವರು ಮುಖ ಮಾಡಿದ್ದು, ಮೈಸೂರು ಕಡೆಗೆ. ಕಾಲೇಜು ಶಿಕ್ಷಣಕ್ಕಾಗಿ ಯುವರಾಜ ಕಾಲೇಜಿಗೆ ಪ್ರವೇಶ ಪಡೆದ ಸಿದ್ದರಾಮಯ್ಯ ಅವರು ಅಲ್ಲಿಯೇ ಬಿ.ಎಸ್ಸಿ ಪದವಿ ಪಡೆದರು.‘ನನ್ನನ್ನು ಡಾಕ್ಟರ್ ಮಾಡಬೇಕೆಂದು ಅಪ್ಪನ ಯೋಚನೆಯಾಗಿತ್ತು’ ಎಂದು ಸಿದ್ದರಾಮಯ್ಯನವರು ಹಳೆಯ ನೆನಪನ್ನು ಮೆಲುಕುಹಾಕುತ್ತಾರೆ. ಅಪ್ಪನ ಬಯಕೆಯ ಹೊರತಾಗಿಯೂ ಸಿದ್ದರಾಮಯ್ಯನವರು ಕಾನೂನು ವ್ಯಾಸಂಗಕ್ಕೆ ಮುಂದಾದರು. ಕಾನೂನು ಪದವಿಗಾಗಿ ಶಾರದಾ ವಿಲಾಸ ಕಾಲೇಜಿಗೆ ಸೇರ್ಪಡೆಯಾದರು. ಅದರ ನಂತರ ಕೆಲಕಾಲ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದರು. ಇದಾದ ನಂತರ ವಕೀಲ ವೃತ್ತಿಯನ್ನು ಆರಂಭಿಸಿದರು.




ಹೋರಾಟದ ಬದುಕು


ನ್ಯಾಯವಾದಿಯಾಗಿ ಸಿದ್ದರಾಮಯ್ಯ ಅವರ ಮನಸ್ಸು ನ್ಯಾಯಾಲಯದಲ್ಲೇ ಕಳೆದು ಹೋಗಲಿಲ್ಲ. ಶೋಷಿತ ವರ್ಗಗಳ ಪರ ಅವರ ಮನ ಸದಾ ಮಿಡಿಯುತ್ತಿತ್ತು. ಹೀಗಾಗಿ ಶ್ರೀ ಸಿದ್ದರಾಮಯ್ಯ ಅವರು ಸಮಾಜವಾದಿ ಚಿಂತಕ ಡಾ. ರಾಮ ಮನೋಹರ ಲೋಹಿಯಾ ಅವರ ಪ್ರಭಾವಕ್ಕೆ ಒಳಗಾದರು.


ವಿದ್ಯಾರ್ಥಿ ಆಗಿದ್ದಾಗ ಮೈಸೂರಿನ ಸುಬ್ಬರಾಯನ ಕೆರೆ ಬಳಿ ಇರುವ ಕಟ್ಟಡದಲ್ಲಿ ರೂಂ ಒಂದನ್ನು ಬಾಡಿಗೆಗೆ ಪಡೆದುಕೊಂಡಿದ್ದ ಸಿದ್ದರಾಮಯ್ಯ ಅವರು ಕಷ್ಟದ ದಿನಗಳನ್ನು ಎದುರಿಸಿದ ಕಾಲವದು. ಅಂದಿನ ಆ ಅನುಭವವೇ ಮುಖ್ಯಮಂತ್ರಿಯಾಗಿ ಬಡವರ ಪರವಾದ ಹಲವಾರು ಯೋಜನೆಗಳನ್ನು ಇಂದು ಜಾರಿಗೆ ತರಲು ಸಹಕಾರಿ ಆಯಿತು. ‘’ಬಡವರ ಕಷ್ಟ ಏನು ಎಂಬುದು ನನಗೆ ಗೊತ್ತು, ಅದನ್ನು ಸ್ವಂತ ಅನುಭವಿಸಿದವನು ನಾನು. ಆದ್ದರಿಂದಲೇ ಅನ್ನಭಾಗ್ಯ, ಕ್ಷೀರಭಾಗ್ಯ, ವಿದ್ಯಾಸಿರಿ, ಮತ್ತಿತರ ಯೋಜನೆಗಳನ್ನು ಜಾರಿಗೆ ತರುವ ನಿರ್ಧಾರ ಕೈಗೊಂಡಿದ್ದೇನೆ’’ ಎಂದು ಸಿದ್ದರಾಮಯ್ಯ ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.


ಪ್ರೊ.ಪಿ.ಎಂ ಚಿಕ್ಕಬೋರಯ್ಯ ಎಂಬುವರ ಬಳಿ ವಕೀಲ ವೃತ್ತಿಯನ್ನು ಅಭ್ಯಾಸ ಮಾಡುತ್ತಿದ್ದ ಶ್ರೀ ಸಿದ್ದರಾಮಯ್ಯ ಅವರು ಕ್ರಮೇಣ ಸಾರ್ವಜನಿಕ ಜೀವನಕ್ಕೆ ತೆರೆದುಕೊಂಡರು. ನಾಯಕತ್ವದ ಗುಣಲಕ್ಷಣಗಳನ್ನು ಮೈಗೂಡಿಸಿಕೊಳ್ಳತೊಡಗಿದರು.




ರಾಜಕಾರಣದ ಆರಂಭ


ಶೋಷಿತ ವರ್ಗಗಳ ಕಷ್ಟಕಾರ್ಪಣ್ಯಗಳಿಗಾಗಿ ಸದಾ ಮಿಡಿಯುತ್ತಿದ್ದ ಶ್ರೀ ಸಿದ್ದರಾಮಯ್ಯನವರಲ್ಲಿ ಸಾಮಾಜಿಕ ನ್ಯಾಯದ ಆಶಯ ಸೈದ್ದಾಂತಿಕವಾಗಿ ಸ್ಪಷ್ಟಗೊಳ್ಳಲು ಕಾರಣವಾದುದು ಡಾ,ರಾಮಮನೋಹರ ಲೋಹಿಯಾ ಚಿಂತನೆ. ಇದಕ್ಕಾಗಿ ಅವರು ವಕೀಲ ವೃತ್ತಿಯನ್ನು ಬಿಟ್ಟು ರಾಜಕಾರಣಕ್ಕೆ ಧುಮುಕಿದರು.


ಹೀಗೆ ವಕೀಲ ವೃತ್ತಿಯನ್ನು ಬಿಟ್ಟು ಬಂದ ಸಿದ್ದರಾಮಯ್ಯ ಅವರು ರಾಜಕೀಯದಲ್ಲಿ ಒಂದೊಂದೇ ಹೆಜ್ಜೆ ಇಡುತ್ತಾ ಮುಂದೆ ಸಾಗಿದರು. 1978ರಲ್ಲಿ ರಾಜಕಾರಣದಲ್ಲಿ ಅಧಿಕೃತವಾಗಿ ಪ್ರವೇಶಮಾಡಿದ ಸಿದ್ದರಾಮಯ್ಯ ಅವರು ತಾಲ್ಲೂಕು ಅಭಿವೃದ್ಧಿ ಮಂಡಳಿಯ ಸದಸ್ಯರಾದರು. ಜೊತೆ ಜೊತೆಗೆ ರೈತ ಚಳವಳಿಯತ್ತ ಆಕರ್ಷಿತರಾದರು. ಹೀಗಾಗಿ ಅವರಿಗೆ ಪ್ರೊ.ಎಂ.ಡಿ ನಂಜುಂಡ ಸ್ವಾಮಿ ಅವರ ಒಡನಾಟ ಲಭಿಸಿತು.


1980ರಲ್ಲಿ ಶ್ರೀ ಸಿದ್ದರಾಮಯ್ಯ ಅವರು ಮೊದಲಬಾರಿ ಮೈಸೂರು ಲೋಕಸಭೆ ಕ್ಷೇತ್ರದಿಂದ ಚುನಾವಣಾ ಅಖಾಡಕ್ಕೆ ಇಳಿದರು. ಆದರೆ ಗೆಲುವು ಸಾಧ್ಯವಾಗಲಿಲ್ಲ. ಆದರೆ ಹುಟ್ಟು ಛಲಗಾರ ಆ ಸೋಲಿನಿಂದ ಹಿಮ್ಮೆಟ್ಟಲಿಲ್ಲ. ಮೊದಲ ಸೋಲನ್ನೇ ಗೆಲುವಿನ ಸೋಪಾನ ಮಾಡಿಕೊಂಡ ಶ್ರೀ ಸಿದ್ದರಾಮಯ್ಯನವರು 1983ರ ವಿಧಾನಸಭೆ ಚುನಾವಣೆಯಲ್ಲಿ ಲೋಕದಳದ ಅಭ್ಯರ್ಥಿಯಾಗಿ ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿದರು. ತಕ್ಕಡಿ ಗುರುತಿನೊಂದಿಗೆ ಕಣಕ್ಕಿಳಿದಿದ್ದ ಶ್ರೀ ಸಿದ್ದರಾಮಯ್ಯನವರು ಇಂದಿರಾ ಕಾಂಗ್ರೆಸ್‍ನ ಡಿ ಜಯದೇವರಾಜ ಅರಸು ಅವರನ್ನು ಸೋಲಿಸಿ ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದರು.. ಇದರಲ್ಲಿ ಮೈಸೂರು ತಾಲ್ಲೂಕಿನ ಮುಖಂಡರಾಗಿದ್ದ ಕೆಂಪವೀರಯ್ಯ ಎಂಬುವರ ಪಾತ್ರ ಪ್ರಮುಖವಾಗಿತ್ತು.


ಶ್ರೀ ಸಿದ್ದರಾಮಯ್ಯ ಅವರು ವಿಧಾನಸಭೆಗೆ ಪ್ರವೇಶ ಪಡೆದಾಗ ಶ್ರೀರಾಮಕೃಷ್ಣ ಹೆಗಡೆ ಅವರ ನೇತೃತ್ವದ ಸರ್ಕಾರ ಇತ್ತು. ಸರ್ಕಾರ ರಚನೆಗೆ ಹೆಗಡೆ ಅವರು ಪಕ್ಷೇತರರು ಹಾಗೂ ಬಿಜೆಪಿ ಸದಸ್ಯ ಬೆಂಬಲ ಪಡೆದಿದ್ದರು. ಶ್ರೀ ಸಿದ್ದರಾಮಯ್ಯ ಅವರೂ ಸಹ ಸರ್ಕಾರಕ್ಕೆ ಬೆಂಬಲ ನೀಡಿದ್ದರು. ಹೀಗಾಗಿ ಅವರಿಗೆ ಕನ್ನಡ ಕಾವಲು ಸಮಿತಿಯ ಅಧ್ಯಕ್ಷ ಸ್ಥಾನ ನೀಡಲಾಯಿತು. ಬಳಿಕ ರೇಷ್ಮೆ ಸಚಿವರಾದರು.


1985ರಲ್ಲಿ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆದಾಗ ಶ್ರೀ ಸಿದ್ದರಾಮಯ್ಯ ಅವರು ಜನತಾಪಕ್ಷದಿಂದ ಸ್ಪರ್ಧಿಸಿ ಎರಡನೇ ಬಾರಿ ಚುನಾಯಿತರಾದರು. ಬಳಿಕ ಪಶು ಸಂಗೋಪನೆ, ರೇಷ್ಮೆ ಸಚಿವರಾದರು. ಎಸ್.ಆರ್ ಬೊಮ್ಮಾಯಿ ಅವರ ಮಂತ್ರಿಮಂಡಲದಲ್ಲಿ ಸಾರಿಗೆ ಸಚಿವರಾಗಿಯೂ ಕಾರ್ಯನಿರ್ವಹಿಸಿದರು. 1989ರಲ್ಲಿ ಜನತಾಪಕ್ಷ ಇಬ್ಭಾಗವಾಗಿ ಜನತಾದಳ ಮತ್ತು ಸಮಾಜವಾದಿ ಜನತಾಪಕ್ಷ ಅಸ್ತಿತ್ವಕ್ಕೆ ಬಂತು. ಶ್ರೀ ಸಿದ್ದರಾಮಯ್ಯ ಅವರು ಆಗ ಜನರಾದಳದೊಂದಿಗೆ ಗುರುತಿಸಿಕೊಂಡರು. ಆದರೆ ಆ ಪಕ್ಷದ ಅಭ್ಯರ್ಥಿಯಾಗಿ ವಿಧಾನಸಭೆ ಚುನಾವಣೆಯಲ್ಲಿ ಪರಾಭವ ಹೊಂದಿದರು. 1991ರಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡರು. ಅದು ಶ್ರೀ ಸಿದ್ದರಾಮಯ್ಯನವರ ರಾಜಕೀಯ ಜೀವನದಲ್ಲಿ ತುಸು ಹಿನ್ನಡೆಯ ಕಾಲ.


ಎದೆಗುಂದದ ಶ್ರೀ ಸಿದ್ದರಾಮಯ್ಯ ಅವರು 1994ರ ವಿಧಾನಸಭೆ ಚುನಾವಣೆಯಲ್ಲಿ ಜನತಾದಳ ಉಮೇದುದಾರರಾಗಿ ಸ್ವರ್ಧಿಸಿ ಮೂರನೆ ಬಾರಿ ವಿಧಾನಸಭೆ ಪ್ರವೇಶಿಸಿದರು. ಶ್ರೀ ಹೆಚ್.ಡಿ ದೇವೇಗೌಡರ ಸಚಿವ ಸಂಪುಟದಲ್ಲಿ ಹಣಕಾಸು ಮಂತ್ರಿಗಳಾದರು. ಅವರು ಮೊಟ್ಟ ಮೊದಲ ಬಾರಿಗೆ ಮುಂಗಡ ಪತ್ರ ಮಂಡಿಸಲು ಸಿದ್ಧತೆ ನಡೆಸುತ್ತಿದ್ದಾಗ ‘’ಕುರಿ ಕಾಯವವನಿಗೇನು ಗೊತ್ತು ಲೆಕ್ಕ? ಎಂದು ಹೀಯಾಳಿಸಿದ್ದುಂಟು. ಈ ಅಪಮಾನದಿಂದ ಅವರು ಕುಗ್ಗಲಿಲ್ಲ, ಬದಲಿಗೆ ಈ ಸವಾಲನ್ನು ಸ್ವೀಕರಿಸಿದರು. ಅದರ ಫಲವಾಗಿಯೇ ಮುಂದಿನ ಒಂಭತ್ತು ಮುಂಗಡಪತ್ರಗಳನ್ನು ಮಂಡಿಸಿ ಆರ್ಥಿಕತಜ್ಞರಿಂದಲೂ ಸೈ ಎನಿಸಿಕೊಂಡರು. ಶ್ರೀ ದೇವೇಗೌಡರು 1996ರಲ್ಲಿ ಪ್ರಧಾನಿಯಾದಾಗ ಜೆ.ಹೆಚ್ ಪಟೇಲರ ಮಂತ್ರಿಮಂಡಲದಲ್ಲಿ ಸಿದ್ದರಾಮಯ್ಯ ಅವರು ಉಪ ಮುಖ್ಯಮಂತ್ರಿಗಳಾದರು.


1999ರಲ್ಲಿ ಜನತಾದಳ ಮತ್ತೆ ಹೋಳಾಯಿತು. ಆಗ ಶ್ರೀ ಸಿದ್ದರಾಮಯ್ಯ ಅವರು ಜಾತ್ಯತೀತ ಜನತಾದಳದೊಂದಿಗೆ ಗುರುತಿಸಿಕೊಂಡರು. ಆದರೆ ಆ ಪಕ್ಷದ ಅಭ್ಯರ್ಥಿಯಾಗಿ ವಿಧಾನಸಭೆ ಚುನಾವಣೆಯಲ್ಲಿ ಶ್ರೀ ಸಿದ್ದರಾಮಯ್ಯ ಅವರು ಪರಾಭವ ಹೊಂದಿದರು. 2004ರ ಚುನಾವಣೆಯಲ್ಲಿ ಮತ್ತೆ ಗೆಲುವು ಸಾಧಿಸಿದ ಶ್ರೀ ಸಿದ್ದರಾಮಯ್ಯ ಅವರು ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಗಳಾದರು.


ಬದಲಾದ ರಾಜಕೀಯ ಸಂದರ್ಭದಲ್ಲಿ ಅನಿವಾರ್ಯವಾಗಿ ಸಿದ್ದರಾಮಯ್ಯನವರು ಜೆಡಿಎಸ್ ಪಕ್ಷದಿಂದ ದೂರವಾಗಬೇಕಾಯಿತು. ಎರಡು ಬಾರಿ ಮನೆಹೊಸ್ತಿಲಿನ ವರೆಗೆ ಬಂದಿದ್ದ ಮುಖ್ಯಮಂತ್ರಿ ಸ್ಥಾನ ಕಾಣದ ಕೈಗಳ ಆಟದಿಂದಾಗಿ ತಪ್ಪಿಹೋದಾಗ ಶ್ರೀ ಸಿದ್ದರಾಮಯ್ಯನವರು ಜೆಡಿಎಸ್ ಪಕ್ಷವನ್ನೇ ತೊರೆಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. 2006ರಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿದ್ದರಾಮಯ್ಯ ಅವರು ಜೆಡಿಎಸ್ ನಿಂದ ಹೊರ ಬಂದರು.




ರಾಜಕೀಯ ತಿರುವು


ಜೆ.ಡಿ.ಎಸ್ ನಿಂದ ಹೊರಬಂದ ಶ್ರೀ ಸಿದ್ದರಾಮಯ್ಯ ಅವರು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ 2006ರ ಜುಲೈ 22ರಂದು ಎ.ಐ.ಸಿ.ಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರಿದರು. ಈ ಬೆಳವಣಿಗೆ ಶ್ರೀ ಸಿದ್ದರಾಮಯ್ಯ ಅವರ ರಾಜಕೀಯ ಜೀವನಕ್ಕೆ ಮತ್ತೊಂದು ತಿರುವು ನೀಡಿತು. ಬಳಿಕ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಮರುಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ರೋಚಕ ಗೆಲುವು ಸಾಧಿಸಿದರು.


2008ರಲ್ಲಿ ವಿಧಾನಸಭೆ ಕ್ಷೇತ್ರಗಳ ಮರುವಿಂಗಡಣೆ ಆಯಿತು. ಆಗ ವರುಣಾ ಕ್ಷೇತ್ರ ಹೊಸದಾಗಿ ರಚನೆ ಆಯಿತು. ಆ ಕ್ಷೇತ್ರದಿಂದ ಶ್ರೀ ಸಿದ್ದರಾಮಯ್ಯ ಅವರು ವಿಧಾನಸಭೆ ಪ್ರವೇಶಿಸಿದರು. ಬಳಿಕ ಅವರು ವಿಧಾನಸಭೆ ಪ್ರತಿಪಕ್ಷ ನಾಯಕರಾದರು. ಈ ಸಂದರ್ಭದಲ್ಲಿ ಶ್ರೀ ಸಿದ್ದರಾಮಯ್ಯ ಅವರು ಬಳ್ಳಾರಿಯ ಗಣಿಧಣಿಗಳ ವಿರುದ್ಧ ರಣಕಹಳೆ ಮೊಳಗಿಸಿ ಬೆಂಗಳೂರಿನಿಂದ ಬಳ್ಳಾರಿಯವರೆಗೆ ಪಾದಯಾತ್ರೆ ನಡೆಸಿ ರಾಜ್ಯ ರಾಜಕೀಯದಲ್ಲಿ ಹೊಸಸಂಚಲವನ್ನೇ ಉಂಟುಮಾಡಿದರು.




ಮುಖ್ಯಮಂತ್ರಿ ಗಾದಿಯತ್ತ


2013ರ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಗೆಲುವಿಗೆ ಮಾತ್ರ ಶ್ರಮಿಸದೆ ಇಡೀ ರಾಜ್ಯಸುತ್ತಿ ಕಾಂಗ್ರೆಸ್ ಪರ ಪ್ರಚಾರ ಮಾಡಿ ಪಕ್ಷದ ಭಾರೀ ಗೆಲುವಿಗೆ ಕಾರಣರಾದರು.


ಮೊದಲ ಆದೇಶ

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಶ್ರೀ ಸಿದ್ದರಾಮಯ್ಯನವರು ಆಗಲೇ ನುಡಿದಂತೆ’ನಡೆಯಬೇಕು’’ ಎಂಬ ಸಂಕಲ್ಪವನ್ನು ಮಾಡಿಬಿಟ್ಟಿದ್ದರು. ಚುನಾವಣಾ ಕಾಲದಲ್ಲಿ ಪಕ್ಷ ಪ್ರಕಟಿಸುವ ಪ್ರಣಾಳಿಕೆ ಕೇವಲ ಕಾಗದಗಳ ಕಂತೆಯಾಗಿ ಕಳೆದುಹೋಗಲು ಬಿಡಬಾರದು, ಅದು ಅಧಿಕಾರದ ದಿನಗಳಲ್ಲಿ ಸರ್ಕಾರಕ್ಕೆ ಮಾರ್ಗದರ್ಶಿಯಾಗಬೇಕು ಎಂದು ಅವರು ನಿರ್ಧರಿಸಿದ್ದರು. ಅದರ ಫಲವಾಗಿಯೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮರುಗಳಿಗೆಯಲ್ಲಿಯೇ ಅನ್ನಭಾಗ್ಯ, ಕ್ಷೀರಭಾಗ್ಯ ಮತ್ತು ದಲಿತ,ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಸಾಲ ಮನ್ನಾ, ಕಾರ್ಯಕ್ರಮಗಳನ್ನು ಘೋಷಿಸಿದರು.


ಇಷ್ಟೇ ಅಲ್ಲ ಪಕ್ಷದ ಪ್ರಣಾಳಿಕೆಯಲ್ಲಿ ನೀಡಿದ್ದ 165 ಭರವಸೆಗಳಲ್ಲಿ 60ನ್ನು ತಮ್ಮ ಮೊದಲ ಬಜೆಟ್‍ನಲ್ಲಿಯೇ ಈಡೇರಿಸಿದರು. ಎರಡನೇ ಬಜೆಟ್‍ನಲ್ಲಿ ಪ್ರಣಾಳಿಕೆಯಲ್ಲಿನ ಇನ್ನೂ 30 ಭರವಸೆಗಳನ್ನು ಈಡೇರಿಸಿದರು. ಇದು ಶ್ರೀ ಸಿದ್ದರಾಮಯ್ಯನವರ ಜನಪರ ಧೋರಣೆ, ಬಡವರ ಕಲ್ಯಾಣದ ಬಗ್ಗೆ ಬದ್ದತೆ ಮತ್ತು ಪ್ರಾಮಾಣಿಕ ನಡವಳಿಕೆಗೆ ಸಾಕ್ಷಿ. ದಕ್ಷತೆ ಮತ್ತು ಪ್ರಾಮಾಣಿಕತೆ ಶ್ರೀ ಸಿದ್ದರಾಮಯ್ಯನವರ ವ್ಯಕ್ತಿತ್ವದ ಹೆಗ್ಗುರುತುಗಳು. ಇಂತಹ ಮುಖ್ಯಮಂತ್ರಿಗಳ ಆಡಳಿತದಲ್ಲಿ ಕರ್ನಾಟಕ ಸುರಕ್ಷಿತ ಹಸ್ತದಲ್ಲಿದೆ ಎಂದು ತಿಳಿದುಕೊಂಡು ನಾಡಿನ ಜನತೆ ನೆಮ್ಮದಿಯಾಗಿರಬಹುದು.




ಕುಟುಂಬ....


ಶ್ರೀ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ, ಗೃಹಿಣಿ. ಹಿರಿಯ ಪುತ್ರ ರಾಕೇಶ್, ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಕಿರಿಯ ಪುತ್ರ ಡಾ. ಎಸ್ ಯತೀಂದ್ರ ವೈದ್ಯರಾಗಿದ್ದಾರೆ.


ಶ್ರೀ ಸಿದ್ದರಾಮಯ್ಯ ಅವರು ವೇದಿಕೆಯಲ್ಲಿ ಮಾತಿಗೆ ನಿಂತರೆ ಅಪ್ಪಟ ಮೈಸೂರು ಸೀಮೆಯ ಗ್ರಾಮ ಭಾಷೆ ಹೊರಹೊಮ್ಮುತ್ತದೆ. ಆ ಶೈಲಿಯಲ್ಲಿಯೇ ಭಾಷಣ ಮಾಡಿ ಸಭಿಕರನ್ನು ಸೂಜಿಗಲ್ಲಿನಂತೆ ಸೆಳೆಯುವ ಶಕ್ತಿ ಶ್ರೀ ಸಿದ್ದರಾಮಯ್ಯ ಅವರಿಗೆ ಇದೆ. ಅವರ ಮಾತು ಒರಟು, ಆದರೆ ಮನಸ್ಸು ಮಾತ್ರ ಮೃದು. ಈ ಕಾರಣಕ್ಕಾಗಿಯೇ ಸಿದ್ದರಾಮಯ್ಯ ನವರಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ.




ಆಸಕ್ತಿ....


ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೇರಿದರೂ ಶ್ರೀ ಸಿದ್ದರಾಮಯ್ಯನವರು ಆಂತರ್ಯದಲ್ಲಿ ಅದೇ ಸಿದ್ದರಾಮನಹುಂಡಿಯ ಸಿದ್ದರಾಮಯ್ಯನವರೇ ಆಗಿದ್ದಾರೆ. ವೀರಗಾಸೆ ಕುಣಿತ ಎಂದರೆ ಈಗಲೂ ಸಿದ್ದರಾಮಯ್ಯ ಅವರಿಗೆ ಬಲು ಇಷ್ಟ, ಗ್ರಾಮದಲ್ಲಿ ನಡೆಯುವ ಉತ್ಸವಕ್ಕೆ ಪ್ರತಿವರ್ಷ ಭೇಟಿ ನೀಡುವ ಶ್ರೀ ಸಿದ್ದರಾಮಯ್ಯ ಅವರು ಗ್ರಾಮಸ್ಥರೊಂದಿಗೆ ಸೇರಿ ಹೆಜ್ಜೆ ಹಾಕುತ್ತಾರೆ. ಇನ್ನು ಬೋಂಡಾ ಸಾಂಬಾರ್ ಎಂದರೆ ಶ್ರೀ ಸಿದ್ದರಾಮಯ್ಯ ಅವರಿಗೆ ಬಲು ಇಷ್ಟ. ರಾಗಿ ಮುದ್ದೆ, ನಾಟಿ ಕೋಳಿ ಸಾರು ಪ್ರಿಯವಾದ ಆಹಾರ, ಬೆಳಗಿನ ಉಪಹಾರಕ್ಕೆ ದೊಸೆ, ರಾಗಿ ದೊಸೆ, ಮಸಾಲೆ ದೊಸೆ, ಇಡ್ಲಿ, ನಾಟಿ ಕೋಳಿ ಸಾರು ಬಯಸುತ್ತಾರೆ.


ರಾಜಕೀಯ ಮಾತ್ರವಲ್ಲ, ಶ್ರೀ ಸಿದ್ದರಾಮಯ್ಯ ಅವರಿಗೆ ಮೊದಲಿನಿಂದಲೂ ಸಾಹಿತಿಗಳ ಒಡನಾಟ ಹೆಚ್ಚು. ಆದ್ದರಿಂದಲೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಅವರು ಯಾವುದೇ ಮಠ-ಮಂದಿರಗಳಿಗೆ ಹೋಗಲಿಲ್ಲ, ಅವರು ಭೇಟಿ ನೀಡಿದ್ದು ಸಾಹಿತಿಗಳಾದ ಯು.ಆರ್.ಅನಂತಮೂರ್ತಿ, ಜಿ.ಎಸ್.ಶಿವರುದ್ರಪ್ಪ, ದೇವನೂರ ಮಹಾದೇವ ಅವರ ಮನೆಗಳಿಗೆ...